ನವಸಾರಿ
ಗುಜರಾತ್ ರಾಜ್ಯದ ವಲಸಾದ್ (ಬಲ್‍ಸಾರ್) ಜಿಲ್ಲೆಯ ಉಪವಿಭಾಗ ಮತ್ತು ತಾಲ್ಲೂಕಿನ ಮುಖ್ಯಸ್ಥಳ. ಉ.ಅ. 200 51 ಮತ್ತು ಪೂ.ರೇ. 720 55 ಮೇಲೆ, ಕರಾವಳಿಯಲ್ಲಿ, ಪೂರ್ಣಾ ನದಿಯ ದಂಡೆಯ ಮೇಲೆ ಇದೆ. ಇದು ಪಶ್ಚಿಮ ರೈಲ್ವೆಯ ಒಂದು ನಿಲ್ದಾಣ. ಹಲವು ಹೆದ್ದಾರಿಗಳು ಇದರ ಮೂಲಕ ಹಾದು ಹೋಗುತ್ತವೆ. 8ನೆಯ ಶತಮಾನದಲ್ಲಿ ಪರ್ಷಿಯದಿಂದ ಭಾರತಕ್ಕೆ ವಲಸೆ ಬಂದ ಜóರತುಷ್ಟ್ರ ಮತೀಯರಾದ ಪಾರ್ಸಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲಿ ನೆಲೆಸಿದರು. ಇಂದಿಗೂ ಇದು ಪಾರ್ಸಿಗಳ ಒಂದು ಮುಖ್ಯ ಕೇಂದ್ರ. ಇಲ್ಲಿ ಅವರ ಅಗ್ನಿಮಂದಿರಗಳಿವೆ. ಮೊಗಲ್ ಚಕ್ರವರ್ತಿ ಅಕ್ಬರನ ದರ್ಬಾರಿನಲ್ಲಿ 1576-79ರಲ್ಲಿ ನಡೆದ ಧಾರ್ಮಿಕ ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸಿದ ನವಸಾರಿಯ ದಸ್ತೂರ್ ಮೆಹರಜೀ ರಾಣಾನಿಗೆ ಅಕ್ಬರ್ 200 ಬಿಘಾ ಜಮೀನನ್ನು ನೀಡಿದ. ರಾಜಕೀಯ ಧುರೀಣರಲ್ಲೊಬ್ಬನಾದ ದಾದಾಭಾಯಿ ನವರೋಜಿಯವರು ನವಸಾರಿಯವರು. ನವಸಾರಿಯಲ್ಲಿ ಹಿಂದೂ ದೇವಾಲಯಗಳೂ ಮಸೀದಿಗಳೂ ಉಂಟು.

ಹತ್ತಿ, ಸಾವೆ. ಸಾಗುವನಿ ಮುಂತಾದ ಸರಕುಗಳಿಗೆ ಇದೊಂದು ವ್ಯಾಪಾರಸ್ಥಳ. ಇಲ್ಲಿ ಗಿರಣಿಗಳಿಗೂ ನೇಯ್ಗೆ, ಲೋಹಗಾರಿಕೆ ಮತ್ತು ಚರ್ಮ ಕೈಗಾರಿಕೆಗಳೂ ಇವೆ. ನವಸಾರಿ ನಗರ ಪ್ರದೇಶದ ಜನಸಂಖ್ಯೆ 81,101 (1971); ತಾಲ್ಲೂಕಿನದು 2,76,425.							
		(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ